ಹನ್ನೆರಡನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರ ಜೀವನ ಚರಿತ್ರೆಯೆಂದೇ ಪರಿಗಣಿಸುವ ಭೀಮ ಕವಿಯ ‘ಬಸವ ಪುರಾಣ’ ತಾಳೆಗರಿಯ ರೂಪದಲ್ಲಿ ತಾಲ್ಲೂಕಿನಲ್ಲಿ ಕೆಲವಾರು ಮನೆಗಳಲ್ಲಿ ಈಗಲೂ ಜೋಪಾನವಾಗಿದೆ.
1369ರಲ್ಲಿ ಭೀಮ ಕವಿ ‘ಪಾಲ್ಕುರಿಕೆ ಸೋಮನಾಥ’ರ ‘ಬಸವ ಪುರಾಣಂ’ ಅನ್ನು ಕನ್ನಡಕ್ಕೆ ಅನುವಾದಿಸಿದರು. ಅವರ ‘ಬಸವ ಪುರಾಣ’ ಕೃತಿಯು ಹಳಗನ್ನಡದಲ್ಲಿದ್ದು, ಅದನ್ನು ತಾಳೇಗರಿಗಳಲ್ಲಿ ನೂರಾರು ಹಸ್ತಪ್ರತಿಗಳನ್ನು ಮಾಡಿ ಶರಣರ ಮೂಲಕ ನಾನಾ ಕಡೆ ತಲುಪಿಸಲಾಯಿತು. ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಈ ರೀತಿಯ ತಾಳೇಗರಿಗಳನ್ನು ಸಂರಕ್ಷಿಸಲಾಗಿದೆ. ಹಲವಾರು ಭಾಷೆಗಳಿಗೆ ಈ ಕೃತಿ ಅನುವಾದಗೊಂಡಿದೆ. ವೆಲ್ಚೆರು ನಾರಾಯಣರಾವ್ ಮತ್ತು ಜೀನ್.ಎಚ್.ರೋಘೇರ್ ‘ಶಿವಾಸ್ ವಾರಿಯರ್ಸ್’ ಎಂಬ ಹೆಸರಿನಲ್ಲಿ ಇಂಗ್ಲೀಷ್ಗೆ ಅನುವಾದಿಸಿದ್ದು, ಅದನ್ನು ಅಮೆರಿಕದ ಪ್ರಿನ್ಸ್ಟನ್ ಲೆಗೆಸಿ ಲೈಬ್ರರಿ ಪ್ರಕಟಿಸಿದ್ದಾರೆ. ಪಿ.ವಿ.ನಾರಾಯಣ ಅವರು ಆಧುನಿಕ ಕಾಲದಲ್ಲಿ ಸೋಮನಾಥನ ತೆಲುಗು ಬಸವ ಪುರಾಣವನ್ನು ಅದೇ ಛಂದಸ್ಸಿನಲ್ಲಿ ಅನುವಾದಿಸಿದ್ದಾರೆ. ಆರ್.ಸಿ.ಹಿರೇಮಠ್ ಅವರು ಭೀಮ ಕವಿಯ ಬಸವ ಪುರಾಣವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.