ಇತಿಹಾಸದ ಸಣ್ಣ ತುಣುಕು ಸಿಕ್ಕಾಗ ಹಿಂದಿನ ಕಾಲಕ್ಕೆ ಪಯಣ ಸಾಧ್ಯವಾಗುತ್ತದೆ. ಬದಲಾದ ಸಂಗತಿಗಳ ತುಲನೆ, ಮೌಲ್ಯಗಳ ಮರುಮಾಪನ, ರೀತಿ ರಿವಾಜುಗಳ ಬಗ್ಗೆ ತಿಳಿದು ಬೆರಗನ್ನು ಉಂಟುಮಾಡುತ್ತದೆ.
ತಾಲ್ಲೂಕಿನ ತಲದುಮ್ಮನಹಳ್ಳಿಯ ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ ಅವರು ತಮ್ಮ ತಂದೆಯ ಕಾಲದ ಪೀಠೋಪಕರಣಗಳನ್ನು ದುರಸ್ತಿಗೊಳಿಸುವಾಗ ಈ ರೀತಿಯ ಅಪರೂಪದ ಐತಿಹಾಸಿಕ ತುಣುಕೊಂದನ್ನು ಸ್ಪರ್ಶಿಸಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷವಾದ 1947 ರಲ್ಲಿ ಬ್ಯಾಂಕ್ ಆಫ್ ಮೈಸೂರ್ ಲಿಮಿಟೆಡ್ ನ ಜನರಲ್ ಮ್ಯಾನೇಜರ್ ಆಗಿದ್ದ ಬಿ.ವಿ.ನಾರಾಯಣರೆಡ್ಡಿ ಅವರು ಮೈಸೂರು ಮಹಾರಾಜರ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದ ರಜಾ ದಿನಗಳ ಪಟ್ಟಿಯಿದು. ಸರ್ಕಾರದ 1917ರ ನೆಗೋಶಿಯಬಲ್ ಇನ್ಟ್ರುಮೆಂಟ್ ಆಕ್ಟ್ ನ ಅನ್ವಯ ಘೋಷಣೆಯಾದ ರಜಾ ದಿನಗಳವು. ಇವುಗಳಲ್ಲಿ ವಿಶೇಷವೆನಿಸುವಂಥಹವು ಎರಡು ರಜೆಗಳು. ಜೂನ್ 12 ರಂದು ಬ್ರಿಟಿಷ್ ದೊರೆಯ ಪ್ರೀತ್ಯರ್ಥಕ್ಕಾಗಿ ‘ಕಿಂಗ್ ಎಂಪರೆರ್ ಜನ್ಮದಿನ’ ಕ್ಕಾಗಿ ನೀಡಿರುವ ರಜೆ ಹಾಗೂ ಜುಲೈ 9 ರಂದು ಮೈಸೂರು ಮಹಾರಾಜರ ಜನ್ಮದಿನಕ್ಕಾಗಿ ನೀಡಿರುವ ರಜೆ.
ಮೈಸೂರು ಬ್ಯಾಂಕ್ ಎಂದೇ ಹೆಸರಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇಂದು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾಗಿದೆ. ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ, ಸುಮಾರು 20 ಲಕ್ಷ ರೂಪಾಯಿಗಳ ಬಂಡವಾಳ ತೊಡಗಿಸಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಬ್ಯಾಂಕ್ ಸ್ಥಾಪಿಸಿದ್ದ ಸಂಗತಿ ಬಹುಷಃ ಬಹಳಷ್ಟು ಜನರಿಗೆ ತಿಳಿದಿಲ್ಲ. ‘ಬ್ಯಾಂಕ್ ಆಫ್ ಮೈಸೂರ್ ಲಿಮಿಟೆಡ್’ ಎಂದು ಆಗ ಇದನ್ನು ಕರೆಯುತ್ತಿದ್ದರು.
ಸುಮಾರು 102 ವರ್ಷಗಳ ಹಿಂದೆ 1913ರ ಮೇ 19 ರಂದು ಸ್ಥಾಪನೆಯಾದ ಬ್ಯಾಂಕ್ ತನ್ನ ಕಾರ್ಯವನ್ನು ಪ್ರಾರಂಭಿಸಿದ್ದು ಅದೇ ವರ್ಷ ಗಾಂಧೀಜಿ ಜನ್ಮದಿನದಂದು(ಅಕ್ಟೋಬರ್ 2). 1959 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂದು ಹೆಸರಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಂಗಸಂಸ್ಥೆ ಬ್ಯಾಂಕ್ ಆಗಿ ನಂತರ 1969ರಲ್ಲಿ ರಾಷ್ಟ್ರೀಕರಣಗೊಂಡಿತು.
‘ನಮ್ಮ ಮನೆಯಲ್ಲಿದ್ದ ಹಳೆಯ ಪೀಠೋಪಕರಣಗಳನ್ನು ನವೀಕರಣಗೊಳಿಸುವ ಸಮಯದಲ್ಲಿ ಈ ಅಪರೂಪದ ಐತಿಹಾಸಿಕ ಪುಟವೊಂದು ಲಭಿಸಿತು. ದೇಶವೆಲ್ಲಾ ಸ್ವಾತಂತ್ರ್ಯದೆಡೆಗೆ ತುಡಿಯುತ್ತಿದ್ದ ಘಳಿಗೆಯದು. ಮೈಸೂರ್ ಬ್ಯಾಂಕಿನ ಇತಿಹಾಸ, ಮೈಸೂರು ರಾಜರ ಬ್ರಿಟಿಷ್ ನಿಷ್ಠೆ, ಆಗಿನವರ ಆದ್ಯತೆ, ರಜೆ ನೀಡುತ್ತಿದ್ದ ರೀತಿ ಎಲ್ಲವೂ ಕಣ್ಮುಂದೆ ಸುಳಿಯುತ್ತದೆ. ಆ ಕಾಲದಲ್ಲೊಂದು ಪಯಣ ಈ ಕಾಗದದಿಂದ ಸಾಧ್ಯವಾಗುತ್ತದೆ. ಎಲ್ಲಾ ಜಾತಿ ಧರ್ಮಗಳಿಗೂ ಆಗ ಅವರು ನೀಡಿರುವ ಮಾನ್ಯತೆ ಕೂಡ ಇದರಿಂದ ತಿಳಿಯುತ್ತದೆ’ ಎನ್ನುತ್ತಾರೆ ತಲದುಮ್ಮನಹಳ್ಳಿಯ ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ.
–ಡಿ.ಜಿ.ಮಲ್ಲಿಕಾರ್ಜುನ.
- Advertisement -
- Advertisement -
- Advertisement -